ಅನುಸೂಚಿತ ಜಾತಿಗಳು

ಸಹಸ್ರಾರು ವರ್ಷಗಳಿಂದಲೂ ಹಿಂದೂಧರ್ಮದ ಹೊರವಲಯದಲ್ಲೆ ಉಳಿದುಕೊಂಡು, ಚತುರ್ವರ್ಣಗಳಿಗೆ ಹೊರತಾಗಿದ್ದ ಅಂತ್ಯಜ, ಅತಿಶೂದ್ರ, ಪಂಚಮ, ಚಂಡಾಲ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿದ್ದ ಅನೇಕ ಜಾತಿಗಳನ್ನು ಒಟ್ಟಿಗೆ ಸೇರಿಸಿ ಅವನ್ನು 1990ರ ಭಾರತ ರಾಜ್ಯಾಂಗರಚನೆಯಲ್ಲಿ ಅನುಸೂಚಿತಜಾತಿಗಳು (ಷೆಡ್ಯೂಲ್ ಕ್ಯಾಸ್ಟ್ಸ್) ಎಂದು ಹೆಸರಿಸಲಾಯಿತು. ಆದರೆ ಆ ಜಾತಿಗಳು ಯಾವುವೆಂಬುದನ್ನು ವಿಷದವಾಗಿ ಅಲ್ಲಿ ಸೂಚಿಸಿಲ್ಲ. ರಾಜ್ಯಾಂಗ ರಚನೆಯ 341ನೆಯ ವಿಭಾಗದಲ್ಲಿ ಒಂದೊಂದು ರಾಜ್ಯದ ಸರ್ಕಾರದೊಡನೆಯೂ ಸಮಾಲೋಚನೆ ನಡೆಸಿ ರಾಜ್ಯಾಂಗರಚನೆಯ ಉದ್ದೇಶಕ್ಕಾಗಿ, ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಕೆಲವು ಜಾತಿ, ಕುಲ, ಪಂಗಡ ಅಥವಾ ಅವುಗಳ ಭಾಗಗಳನ್ನು ಅಥವಾ ಅಂತರ್ವಿಭಾಗಗಳನ್ನು ಅನುಸೂಚಿತಜಾತಿಗಳನ್ನಾಗಿ ಪ್ರಕಟಿಸಲು ರಾಷ್ಟ್ರಾಧ್ಯಕ್ಷರಿಗೆ ಅಧಿಕಾರ ನೀಡಿದೆ. ಅದೇ ವಿಭಾಗದ ಎರಡನೆಯ ಅಂಶದಲ್ಲಿ, ಹಾಗೆ ಪ್ರಕಟಿಸಿದ ಪಟ್ಟಿಗೆ ಹೊಸ ಜಾತಿಗಳನ್ನು ಸೇರಿಸುವ, ಹಾಗೂ ಸೇರಿರುವ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕುವ ಅಧಿಕಾರವನ್ನು ಸಂಸತ್ತಿಗೆ (ಪಾರ್ಲಿಮೆಂಟ್) ಕೊಡಲಾಗಿದೆ. ಆದ್ದರಿಂದ ಆಯಾ ಕಾಲದಲ್ಲಿ ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಕಟಿಸಿರುವ ಅನುಸೂಚಿತ ಜಾತಿಗಳ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಿರುವ ವರ್ಗಗಳನ್ನು ಅನುಸೂಚಿತ ಜಾತಿಗಳೆಂದು ಹೇಳಬಹುದು.
ಪ್ರಾಚೀನಕಾಲದಿಂದಲೂ ಭಾರತದ ಸಮಾಜಜೀವನ ಜಾತಿಪದ್ಧತಿಗೆ ಹೆಸರಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬವು ಸಹಸ್ರಾರು ವರ್ಷಗಳಿಂದಲೂ ಬಳಕೆಯಲ್ಲಿರುವ ಚತುರ್ವರ್ಣಗಳು. ಈ ಚತುರ್ವರ್ಣಗಳಿಗೆ ಸೇರದ ಅನೇಕ ಜಾತಿಗಳೂ ನಡೆದುಕೊಂಡು ಬರುತ್ತಿವೆ. ಅಂಥ ಪಂಗಡದವರು ಅನುಸರಿಸುತ್ತಿದ್ದ ವೃತ್ತಿ, ಅವರ ಜನ್ಮಮೂಲ ಇತ್ಯಾದಿ ಕಾರಣಗಳಿಂದ ಅವರು ಸಮಾಜದ ಅತ್ಯಂತ ಕೆಳವರ್ಗದವರೆಂದೂ ಅವರ ಸಂಪರ್ಕ ದೋಷ್ಯವೆಂದೂ ಪರಿಗಣಿಸಿದುದರ ಫಲವಾಗಿ ಅವರೆಲ್ಲ ಹಿಂದೂಧರ್ಮದ ಹೊರವಲಯದಲ್ಲೆ ಇದ್ದುಕೊಂಡು ಅಸ್ಪøಶ್ಯರೆನಿಸಿದರು. ಭಾರತದಲ್ಲಿ ಅಸ್ಪøಶ್ಯತೆಯ ಸಂಪ್ರದಾಯ 1955ರವರೆಗೂ ನಡೆದುಕೊಂಡೇ ಬಂದಿರುವುದೆಂದು ಹೇಳಿದರೆ ಭಾರತೀಯ ಸಮಾಜಜೀವನದಲ್ಲೂ ಧರ್ಮ ಸಂಸ್ಕøತಿಗಳಲ್ಲೂ ಆ ಸಂಪ್ರದಾಯದ ಬಗ್ಗೆ ಇರತಕ್ಕ ಅಭಿಪ್ರಾಯಗಳು ಪರಿಶೀಲನಾರ್ಹವೆನಿಸುತ್ತವೆ. 

ಅಸ್ಪøಶ್ಯತೆ ಒಂದು ಪ್ರಬಲಸಂಪ್ರದಾಯವಾಗಿ ಬೆಳೆದುದಕ್ಕೆ ಸವರ್ಣೀಯರ ಆಚಾರವ್ಯವಹಾರಗಳ ಮತ್ತು ಅನುಸರಿಸುತ್ತಿದ್ದ ವೃತ್ತಿಗಳ ಮಡಿವಂತಿಕೆಯ ಮನೋಭಾವ ಮೂಲಕಾರಣವೆನ್ನಬಹುದು. ಆದರೂ ಪ್ರಾಚೀನಕಾಲದಲ್ಲಿ ಈ ಸಂಪ್ರದಾಯದ ಉಗಮಕ್ಕೆ ಇತರ ಕಾರಣಗಳೂ ಇದ್ದಿರಬೇಕೆನ್ನಲು ಆಧಾರಗಳಿವೆ. ಬ್ರಾಹ್ಮಣಮಹಿಳೆಗೂ ಶೂದ್ರನಿಗೂ ಜನಿಸಿದ ಸಂತತಿಯನ್ನು ಚಂಡಾಲನೆಂದು ಧರ್ಮ ಸೂತ್ರಕಾರರು ವಿಭೇದೀಕರಿಸಿ ಚತುರ್ವರ್ಣೀಯರಿಂದ ಧಾರ್ಮಿಕವಾಗಿ, ಸಾಮಾಜಿಕವಾಗಿ ದೂರೀಕೃತರೆಂದು ಸೂಚಿಸಿರುವರು; ಕ್ರಿ. ಪೂ. 800ರ ಸುಮಾರಿನಲ್ಲಿ ಅವರು ಹಂದಿ, ನಾಯಿಗಳಿಗಿಂತ ಕೀಳಾದವರೆಂದು ಸಂಭೋಧಿಸದೆ (ಛಾಂದೋಗ್ಯೋಪನಿಷತ್ತು). ಕೌಟಿಲ್ಯನ ಕಾಲಕ್ಕೆ ಈ ಭಾವನೆಗಳು ಬಲಗೊಂಡು ಅಂಥ ಸಂಕರಜಾತಿಯವರು ತಮ್ಮ ತಮ್ಮೊಳಗೇ ವಿವಾಹವಾಗಬೇಕೆಂಬ ಕಟ್ಟುಬೆಳೆದು ಬರುತ್ತದೆ; ಜೊತೆಗೆ, ಅವರೊಡನೆ ಎಲ್ಲ ಸಮಾಜಸಂಪರ್ಕಗಳೂ ನಿಷಿದ್ಧವೆನಿಸಿದುವು. ಮನು ತನ್ನ ಧರ್ಮಶಾಸ್ತ್ರದಲ್ಲಿ, ಅವರು ಕೇವಲ ಕನಿಷ್ಠವೃತ್ತಿಗಳ ಆಚರಣೆಗೆ ಮಾತ್ರ ಅರ್ಹರೆಂದು ಸೂಚಿಸಿ, ಅವರನ್ನು ಒಂದು ವರ್ಗ ಅಥವಾ ಜಾತಿಯನ್ನಾಗಿ ಪರಿಗಣಿಸುತ್ತಾನೆ. ಕೌಟಿಲ್ಯ ಅಂಥವರು ಊರ ಹೊರವಲಯದಲ್ಲಿ ವಾಸಿಸಬೇಕೆಂದು ನಿಷ್ಕರ್ಷಿಸಿರುತ್ತಾನೆ. ಪತಂಜಲಿ ಅವರನ್ನು ಶೂದ್ರರಲ್ಲೆ ಒಂದು ಪಂಗಡವೆಂದು ಪರಿಗಣಿಸುವಂತೆ ತೋರುತ್ತದೆ. ಕ್ರಿ.ಪೂ. 500ರ ಸುಮಾರಿನವರೆಗೂ ಅವರು ಶೂದ್ರರ ಅಕ್ಕಪಕ್ಕಗಳಲ್ಲೆ ಊರಿನಲ್ಲಿ ವಾಸಿಸುತ್ತಿದ್ದರು. ಆದರೆ ಕ್ರಮಕ್ರಮವಾಗಿ ಅಂಥ ಜಾತಿಗಳಲ್ಲಿ ಅಂತರ್ವಿಭೇದ ಕಲ್ಪನೆಯಾಯಿತು. ಬಡಗಿ, ಕಮ್ಮಾರ, ಅಗಸ ಇತ್ಯಾದಿ ವೃತ್ತಿಯವರು ಬಳಸುತ್ತಿದ್ದ ಪಾತ್ರೆಗಳನ್ನು ಶುದ್ಧಿ ಮಾಡಿಕೊಳ್ಳಬಹುದೆಂಬ, ಚಂಡಾಲರು ಬಳಸಿದ ಪಾತ್ರೆಗಳನ್ನು ಯಾವ ರೀತಿಯಲ್ಲೂ ಶುದ್ಧಿಮಾಡಲು ಸಾಧ್ಯವೇ ಇಲ್ಲವೆಂಬ ಭಾವನೆ ರೂಢಿಗೆ ಬಂತು. ಬೋಧಾಯನನಂಥ ಧರ್ಮಸೂತ್ರಕಾರರು, ಚಂಡಾಲರು ಕೇಳುವಂತೆ ವೇದಪಠನ ಮಾಡಕೂಡದೆಂದು ನಿಷೇಧವನ್ನು ವ್ಯಕ್ತಪಡಿಸಿರುವರು. ಇವೆಲ್ಲ ಕಾರಣಗಳಿಂದ ಚಂಡಾಲರಾದಿ ಕೆಲವು ವರ್ಗಗಳವರು ಊರ ಹೊರಗೆ ವಾಸಿಸುತ್ತ ತೀರ ಅಧಮವೆಂದು ಪರಿಗಣಿಸಲಾಗಿದ್ದ ವೃತ್ತಿಗಳಲ್ಲಿ ಮಾತ್ರ ತೊಡಗಬಹುದಾಯಿತು. ಕ್ರಿ. ಪೂ. 2ನೆಯ ಶತಮಾನದ ಸುಮಾರಿಗೆ ಅವರನ್ನು ಕಾಣುವುದೂ ದೂಷ್ಯವೆನಿಸಿದದ್ದು, ಕೇವಲ ಗ್ರಾಮಪಾಕೀಜು ಮಾಡುವುದು ಅವರ ವೃತ್ತಿಯಾಗುತ್ತ ಬಂತು. ಒಟ್ಟಿನಲ್ಲಿ, ಆಚಾರವ್ಯವಹಾರಾದಿಗಳ ಮಡಿವಂತಿಕೆಯಂತೆ ಅವರು ಅನುಸರಿಸಬೇಕಾದ ಅಧಮವೃತ್ತಿಗಳೂ ಜನ್ಮಮೂಲವೂ ಅಸ್ಪøಶ್ಯತೆಯ ಸಂಪ್ರದಾಯದ ಉಗಮಕ್ಕೆ ಕಾರಣಗಳಾದುವೆನ್ನಬಹುದು. ಆ ಸಂಪ್ರದಾಯ ಬಲಗೊಂಡು, ಕ್ರಿ. ಶ. ಒಂದನೆಯ ಶತಮಾನದ ವೇಳೆಗೆ ಅವರು ತಾವು ಬರುವುದನ್ನು ಸೂಚಿಸಲು ಕೋಲನ್ನು ಹಿಡಿದು ಬರಬೇಕೆಂದು ಸಮಾಜ ನಿರ್ಬಂಧಿಸುವ ಮಟ್ಟಕ್ಕೆ ಹೋಯಿತು. ವರ್ಣಚತುಷ್ಟಯಕ್ಕೆ ಸೇರದ ಅವರಲ್ಲಿ ಕೆಲವರನ್ನು ಅಂತ್ಯಜರೆಂದು ಕರೆಯಲಾಗುತ್ತಿದ್ದು ಅವರವರು ಅನುಸರಿಸುತ್ತಿದ್ದ ವೃತ್ತಿಯ ಆಧಾರದ ಮೇಲೆ ಅವರಲ್ಲೇ ಭಿನ್ನಭಿನ್ನಜಾತಿಗಳೇರ್ಪಟ್ಟುವು. ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಅವುಗಳಲ್ಲಿ ಅನೇಕ ಜಾತಿಗಳು ಇಂದಿಗೂ ಉಳಿದುಬಂದಿವೆ. ಪಂಜಾಬು, ಬಂಗಾಲ ಮುಂತಾದ ರಾಜ್ಯಗಳಲ್ಲಿ ಬಿದಿರುಕೆಲಸದ ದೊಂಬರೂ ಚರ್ಮಗೆಲಸದ ಚಮ್ಮಾರರೂ ರಾಜಾಸ್ಥಾನ, ಬೊಂಬಾಯಿಗಳಲ್ಲಿ ಗ್ರಾಮಪಾಕೀಜು ವೃತ್ತಿಯ ಭಂಗಿಗಳೂ ತಮಿಳುನಾಡಿನ ಪರೆಯರೂ ಆಂಧ್ರದ ಮಾಲರೂ ಅಸ್ಸಾಮ್ ಬಿಹಾರ್‍ಗಳಲ್ಲಿರುವ ನಾಮಶೂದ್ರರೂ ಇತರರೂ ಇದಕ್ಕೆ ನಿದರ್ಶನವೆನ್ನಬಹುದು. ಇಷ್ಟು ವಿಶಾಲಕ್ಷೇತ್ರದಲ್ಲೆಲ್ಲ ಅಸ್ಪøಶ್ಯತೆಯ ಸಂಪ್ರದಾಯ ಹರಡಿರುವುದು. ಆರ್ಯರು ಇಲ್ಲಿನ ಕೆಲವು ಮೂಲನಿವಾಸಿಗಳನ್ನು ಪರಾಭವಗೊಳಿಸಿದುದರ ಫಲವಾಗಿರಬಹುದು ಎಂದು ವಾದಿಸುವ ಕೆಲವರ ಅಭಿಪ್ರಾಯಕ್ಕೆ ಇದರಿಂದ ಪುಷ್ಟಿ ಸಿಕ್ಕಿದೆ.

ಧರ್ಮವೃತ್ತಿಯನ್ನನುಸರಿಸುವ ಚಮ್ಮಾರರೆಂಬ ಅಂತ್ಯಜರು ಆಸೇತುಹಿಮಾಚಲ ಹರಡಿಕೊಂಡಿದ್ದಾರೆ. ವೇದಗಳ ಕಾಲದಿಂದಲೂ ಈ ವೃತ್ತಿ ನಡೆದುಕೊಂಡೇ ಬಂದಿದೆ; ಆದರೆ ಈ ವೃತ್ತಿ ನೀಚಜಾತಿಯವರದೆಂಬ ಭಾವನೆ ಆಗ ಇತ್ತೆ ಎಂಬುದು ಸಂದೇಹಾಸ್ಪದ. ಸತ್ತಪ್ರಾಣಿಯ ದೇಹವನ್ನು ಮುಟ್ಟಿ ಕೆಲಸಮಾಡಬೇಕಾಗಿದ್ದ ಇವರು ಮನುವಿನ ಕಾಲಕ್ಕೆ ನೀಚವೃತ್ತಿಯವರೆಂದು ಪರಿಗಣಿತರಾಗಿ ಅಸ್ಪøಶ್ಯರೊಡನೆ ಸೇರಬೇಕಾಯಿತು. ಇವರು ಸಂಖ್ಯೆಯಲ್ಲಿ ಹೆಚ್ಚಿದಂತೆ ಹಳ್ಳಿಗಳಲ್ಲಿ ತೋಟಿ, ತಳವಾರ ಮುಂತಾದ ಸಮಾಜದ ಊಳಿಗದ ಕೆಲಸವನ್ನೂ ವಹಿಸಿಕೊಳ್ಳಬೇಕಾಯಿತು. ಇವರು ದೇಶದ ಎಲ್ಲ ಭಾಗಗಳಲ್ಲೂ ಹರಡಿಕೊಂಡಿದ್ದು ಸದ್ಯಕ್ಕೆ ಉತ್ತಮ ಸಾಮಾಜಿಕ ಮಟ್ಟವನ್ನೂ ಮುಟ್ಟಿರುವ ಸಮುದಾಯಗಳನ್ನೊಳಗೊಂಡಿದ್ದಾರೆ. ಇತ್ತೀಚೆಗೆ ಗುಜರಾತು ರಾಜ್ಯದ ಅನುಸೂಚಿತಪಟ್ಟಿಯಿಂದ ಅವರನ್ನು ತೆಗೆದುಹಾಕಿದ್ದು ಈ ನಮ್ಮ ಅಭಿಪ್ರಾಯಕ್ಕೆ ಪುಷ್ಟಿ ಕೊಡುವಂತಿದೆ.

ಅನುಸೂಚಿತಜಾತಿಗಳು (ಷೆಡ್ಯೂಲ್ಡ್ ಕ್ಯಾಸ್ಟ್ಸ್) ಎಂಬ ಹೆಸರನ್ನು ಮೊದಲು 1927ರಲ್ಲಿ ಸೈಮನ್ ಕಮಿಷನ್ ಬಳಸಿತು; ಆನಂತರ ಭಾರತಸರ್ಕಾರ 1935ರ ಕಾನೂನಿನ 300ನೆಯ ವಿಭಾಗದಲ್ಲಿ ಆ ಹೆಸರನ್ನು ಬಳಸಿತು. ಅದುವರೆಗೂ ಅಸ್ಪøಶ್ಯರು ನಿಮ್ನವರ್ಗದವರು, ಹಿಂದುಳಿದವರು ಎನ್ನಲಾಗುತ್ತಿದ್ದವರೆಲ್ಲ ಅದರಲ್ಲಿ ಸೇರಿದ್ದರು. ಅಸ್ಪøಶ್ಯರ ಕಲ್ಯಾಣಕ್ಕಾಗಿ ಪ್ರಚಾರ ಉಪವಾಸಾದಿಗಳನ್ನು ಕೈಕೊಂಡ ಗಾಂಧೀಜಿಯವರು ಅವರನ್ನು ಅಸ್ಪøಶ್ಯರೆನ್ನುವುದು ಪಾಪಕರವೆಂದು ಘೋಷಿಸಿ, ಹರಿಜನರೆಂದು ಕರೆದರು. ಆದರೂ ರಾಜ್ಯಾಂಗರಚನೆಯಲ್ಲಿ ಅವರಿಗೆ ಸೈಮನ್ ಕಮಿಷನ್ ಬಳಸಿದ ಹೆಸರೇ ಉಳಿದುಕೊಂಡಿತು.

ಅಸ್ಪøಶ್ಯತೆ ಹಿಂದೂಧರ್ಮಕ್ಕೂ ಭರತಖಂಡಕ್ಕೂ ಕಳಂಕ ತಂದಿದೆಯೆಂದು ಸಮಾಜ ಸುಧಾರಕರು ಹೇಳುತ್ತಲೇ ಬಂದಿದ್ದಾರೆ; ಕಳೆದ ಶತಮಾನದ ಮಧ್ಯಭಾಗದಲ್ಲಿ ಅದನ್ನು ತೊಡೆದುಹಾಕಲು ನಿರ್ದಿಷ್ಟಯತ್ನ ಆರಂಭವಾಯಿತೆನ್ನಬಹುದು. ಪುಣೆಯ ಜ್ಯೋತಿಬ ಪುಲೆ ಎಂಬುವರು ಆ ಕಾರ್ಯವನ್ನು ಆರಂಭಿಸಿದ ಅಗ್ರಗಾಮಿಗಳೆನ್ನಬಹುದು. ಅವರಂತೆ 1865ರಲ್ಲಿ ಬಂಗಾಳದ ಶಶಿಪಾದ ಬಂಡೋಪಾಧ್ಯಾಯರು ಆ ಯತ್ನಕ್ಕೆ ರಚನಾತ್ಮಕ ಸ್ವರೂಪವನ್ನು ಕೊಟ್ಟರು; ಅಸ್ಪøಶ್ಯರ ಮಕ್ಕಳ ಲಾಲನೆ ಪಾಲನೆ, ಅವರ ಶಿಕ್ಷಣ, ಸಹಪಂಕ್ತಿಭೋಜನ, ಸಮಾಜ ಸಂಪರ್ಕ ಇತ್ಯಾದಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಸವರ್ಣೀಯರ ಪ್ರತಿಭಟನೆಯಿದ್ದರೂ ಧೈರ್ಯದಿಂದ ಸೇವೆ ಸಲ್ಲಿಸಿದರು. 1895ರಲ್ಲಿ ಬೊಂಬಾಯಿಯ ಆರ್. ಜಿ. ಭಂಡಾರ್ಕರ್, ಅಖಿಲ ಭಾರತದ ಸಮಾಜಸಂಘದ ಒಂಬತ್ತನೆಯ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣಮಾಡುತ್ತ, ಅವರ ಉದ್ಧರಣಕಾರ್ಯವನ್ನು ರಾಷ್ಟ್ರೀಯಮಟ್ಟದಲ್ಲಿ ನಡೆಸಬೇಕಾದ ಅಗತ್ಯವನ್ನು ಸೂಚಿಸಿದರು. ಈ ಶತಮಾನದ ಆದಿಯಲ್ಲಿ ಬೊಂಬಾಯಿಯಲ್ಲಿ ವಿ. ಆರ್, ಸಿಂಧೆ ಅವರು ಅಸ್ಪøಶ್ಯರ ಏಳಿಗೆಗಾಗಿ ಒಂದು ಸಂಸ್ಥೆಯನ್ನು ಆರಂಭಿಸಿ ರಚನಾತ್ಮಕ ಕಾರ್ಯಗಳನ್ನು ಕೈಕೊಂಡರು. 1924ರಲ್ಲಿ ಗಾಂಧೀಜಿಯವರು ಅವರ ಬಗ್ಗೆ ಅನುಕಂಪೆಯಿಂದ ಲೇಖನಗಳನ್ನು ಬರೆದು ಅವರ ಉದ್ದರಣಕ್ಕಾಗಿ ವಿವಿಧರೀತಿಯ ಪ್ರಚಾರ ಕಾರ್ಯವನ್ನೂ ರಚನಾತ್ಮಕ ಕಾರ್ಯಕ್ರಮಗಳನ್ನೂ ಹಾಕಿಕೊಂಡು ನಡೆಸುತ್ತ ಬಂದರು. ಅವರ ಯತ್ನದ ಪೂರ್ಣಪ್ರತಿಫಲ ಭಾರತದಲ್ಲಿ ರಾಷ್ಟ್ರೀಯ ಸರ್ಕಾರ ರೂಪುಗೊಂಡ ಮೇಲೆ ಕಾರ್ಯರೂಪಕ್ಕೆ ಬರಲಾರಂಭಿಸಿತು. ಎಲ್ಲ ರಾಜ್ಯಸರ್ಕಾರಗಳೂ ತಮ್ಮ ತಮ್ಮ ಎಲ್ಲೆಕಟ್ಟಿನೊಳಗಿನ ಅನುಸೂಚಿತ ಜಾತಿಗಳ ಕಲ್ಯಾಣಕ್ಕಾಗಿ ಪ್ರಾರಂಭದಿಂದ ವಿಶಿಷ್ಟ ಕಾರ್ಯಕ್ರಮ ಹಾಕಿಕೊಂಡು ಅವರ ಏಳಿಗೆಗೆ ಕಾರ್ಯತಃ ನೆರವಾಗುತ್ತಿವೆ; ಅವರ ಮಕ್ಕಳಿಗೆ ವಿದ್ಯಾರ್ಥಿವೇತನ, ಬಟ್ಟೆಬರೆಗಳು, ಪುಸ್ತಕ ಸ್ಲೇಟುಗಳು ಇತ್ಯಾದಿಗಳನ್ನು ಉಚಿತವಾಗಿ ಒದಗಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿವೆ. ಅವರಿಗಾಗಿ ಊಟವಸತಿ ಸೌಲಭ್ಯಗಳನ್ನೂ ಕಲ್ಪಿಸುತ್ತಿವೆ.

1950ರಲ್ಲಿ ರೂಪುಗೊಂಡ ರಾಜ್ಯಾಂಗರಚನೆಯಲ್ಲಿ ಅನುಸೂಚಿತ ಜಾತಿಯವರ ಏಳಿಗೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ನಿರ್ದಿಷ್ಟ ಕಾರ್ಯ ಕೈಕೊಂಡಿರುವುದು ಕಂಡುಬರುತ್ತದೆ. ಅವರಿಗೆ ಶಾಸನಸಭೆಗಳಲ್ಲಿ ವಿಶಿಷ್ಟ ಪ್ರಾತಿನಿಧ್ಯವನ್ನೂ ಶಿಕ್ಷಣ, ನೌಕರಿ, ಇತ್ಯಾದಿಗಳಲ್ಲಿ ವಿಶೇಷಸೌಲಭ್ಯಗಳನ್ನೂ ನೀಡಲಾಗಿದೆ. ಅದರಲ್ಲಿ ಅಧಿಕಾರ ನೀಡಿರುವಂತೆ, ರಾಷ್ಟ್ರಪತಿಗಳು 1951ರಲ್ಲಿ ಅನುಸೂಚಿತಜಾತಿಗಳ ಮತ್ತು ವರ್ಗಗಳ ಕಮೀಷನರ್‍ರವರನ್ನು ನೇಮಿಸಿ ಅವರ ಅಭಿವೃದ್ಧಿಗಾಗಿ ವ್ಯವಸ್ಥೆಯನ್ನು ಸಿಬ್ಬಂದಿಯನ್ನೂ ಒದಗಿಸಿದರು. ಈ ಕಮೀಷನರ್ 1952ರಲ್ಲಿ ತಮ್ಮ ವರದಿಯನ್ನು ಪ್ರಕಟಿಸಿ, ತಮ್ಮ ಮತ್ತು ತಮ್ಮ ಸಿಬ್ಬಂದಿಯ ಕರ್ತವ್ಯಗಳನ್ನೂ ಅನುಸೂಚಿತಜಾತಿಗಳ ಉನ್ನತಿಗಾಗಿ ಒದಗಿಸಿದ ಹಣದ ಮೊತ್ತವನ್ನೂ ಅದನ್ನು ವಿನಿಯೋಗಿಸಲು ಗೊತ್ತುಮಾಡಿದ ಕಾರ್ಯಕ್ರಮಗಳನ್ನೂ ಆ ಕಾರ್ಯವನ್ನು ನಿರ್ವಹಿಸಿಲು ನೆರವಾದ ಸಂಘಸಂಸ್ಥೆಗಳನ್ನೂ ವಿವರವಾಗಿ ತಿಳಿಸಿರುವರು. ಅನಂತರ ಪ್ರತಿವರ್ಷವೂ ಆ ಜನತೆಯ ಅಭಿವೃದ್ಧಿಗಾಗಿ ನಡೆದ ಕಾರ್ಯಕ್ರಮಗಳನ್ನು ಕುರಿತ ವರದಿಗಳು ಬರುತ್ತಿವೆ. ಅನುಸೂಚಿತಜಾತಿಗಳ ಮತ್ತು ಮಾರ್ಗಗಳ ಕಮೀಷನರಿಗೆ ಸಹಾಯಕರಾಗಿ ಆರುಮಂದಿ ಕಮೀಷನರೂ ಇರುವರು. ಅವರಲ್ಲಿ ಒಬ್ಬರು ದೆಹಲಿಯಲ್ಲೂ ಮಿಕ್ಕ ಐವರು ಭಾರತದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲೂ ಇರುವರು.

ಅನುಸೂಚಿತಜಾತಿಗಳ ಕಲ್ಯಾಣಕ್ಕಾಗಿ ಕೇಂದ್ರಸರ್ಕಾರ ಧನವನ್ನು ಮೀಸಲಿಡುತ್ತಿದೆ. 1945-46ರಲ್ಲಿ ಎಸ್.ಎಸ್.ಎಲ್.ಸಿ.ಮುಗಿಸಿ ಮುಂದಕ್ಕೆ ವಿದ್ಯಾಭ್ಯಾಸಕ್ಕೆ ಹೋದ ಅವರ ಮಕ್ಕಳಿಗೆ ಅಂದಿನ ಸರ್ಕಾರ ಕೇವಲ 2,21,000ರೂ.ಗಳನ್ನು ವೆಚ್ಚ ಮಾಡಿದ್ದರೆ 1953-54ರಲ್ಲಿ ಆ ಹಣ 26,86,000 ರೂಪಾಯಿಗಳಿಗೂ 1959-60ರಲ್ಲಿ 1,43,84,000 ರೂಪಾಯಿಗಳಿಗೂ ಏರಿತು. ಈಚೆಗೆ ಈ ಮೀಸಲುಹಣ ಇನ್ನೂ ಅಧಿಕಗೊಂಡಿದೆ. ಅನುಸೂಚಿತಜಾತಿಯ ಇತರ ಕಲ್ಯಾಣಕಾರ್ಯಗಳಿಗಾಗಿ 1952-53ರಲ್ಲಿ 2.85 ಕೋಟಿ ರೂಪಾಯಿಗಳನ್ನೂ 1954-55ರಲ್ಲಿ 3.37 ಕೋಟಿ ರೂಪಾಯಿಗಳನ್ನೂ ಖರ್ಚುಮಾಡಲಾಯಿತು. ಈಚೆಗೆ ಇದು ಇನ್ನೂ ಅಧಿಕಗೊಂಡಿದೆ.
 	
ಭಾರತಸರ್ಕಾರ ಎಷ್ಟೇ ಆಸಕ್ತಿವಹಿಸಿ ಕೆಲಸಮಾಡುತ್ತಿದ್ದರೂ ಅನುಸೂಚಿತಜಾತಿಯ ಬಗ್ಗೆ ಜನತೆ ತನ್ನ ಮನೋಭಾವವನ್ನು ಪರಿವರ್ತಿಸಿಕೊಳ್ಳುವುದು ಅಗತ್ಯ. ಈ ಕಾರ್ಯ ಉದ್ದೇಶಿಸಿದಷ್ಟು ತೀವ್ರಗತಿಯಲ್ಲಿ ಸಾಗಲಿಲ್ಲ. ಸವರ್ಣೀಯರು ಅವರನ್ನು ವಿವಿಧರೀತಿಯಲ್ಲಿ ಹಿಂಸಿಸಿದ ವರದಿಗಳು ಬರಹತ್ತಿದುವು. ಆಗ 1955ರಲ್ಲಿ, ಭಾರತಸರ್ಕಾರ ಅಸ್ಪøಶ್ಯತೆ ಕಾನೂನು ಬಾಹಿರವೆಂದು ಶಾಸನಮಾಡಿತು. ಅದರ ಫಲವಾಗಿ ಶತಶತಮಾನಗಳಿಂದ ದೇಶದಲ್ಲಿ ಬೇರೂರಿದ್ದ ಆ ದೀನಜನತೆಯ ಬಗ್ಗೆ ಸಾಮಾಜಿಕ ಹೀನಭಾವನೆ ಕಡಿಮೆಯಾಗುತ್ತ ಬಂತು. ದೇವಸ್ಥಾನಗಳಂಥ ಧಾರ್ಮಿಕಕ್ಷೇತ್ರಗಳಿಗೂ ಭಾವಿ, ಕೆರೆ, ಹೋಟೆಲ್, ಸಿನಿಮಾ, ಪಾಠಶಾಲೆ ಇತ್ಯಾದಿ ಸಾಮಾಜಿಕಸ್ಥಳಗಳಿಗೂ ಅವರ ಪ್ರವೇಶಕ್ಕೆ ಹಿಂದಿದ್ದ ಅಡ್ಡಿ ಅಡಚಣೆಗಳು ನಿವಾರಣೆಯಾದುವು. ಅನುಸೂಚಿತಜಾತಿಯ ಜನರಲ್ಲೂ ಈಚೆಗೆ ತಮ್ಮ ಪ್ರಗತಿಯ ಬಗ್ಗೆ ಆಸಕ್ತಿ ಮೂಡಿದೆ; ಅವರು ಕಾನೂನುಬದ್ಧವಾಗಿಯೂ ಚಳುವಳಿಯ ಮೂಲಕವೂ ರಾಜ್ಯಾಂಗದತ್ತ ಹಕ್ಕುಬಾದ್ಯತೆಗಳನ್ನೂ ಸೌಲಭ್ಯಗಳನ್ನೂ ಪಡೆದುಕೊಳ್ಳಲು ಯತ್ನಿಸುತ್ತಿರುವರು. 
 	
1958ರಲ್ಲಿ ದೆಹಲಿಯಲ್ಲಿ ಸೇರಿದ್ದ ರಾಜ್ಯಸಚಿವರ ಸಭೆಯಲ್ಲಿ ತಮ್ಮ ತಮ್ಮ ರಾಜ್ಯಗಳ ಅನುಸೂಚಿತಜಾತಿಯವರಿಗೆ ವಸತಿಸೌಲಭ್ಯ, ಶಿಕ್ಷಣಸಂಸ್ಥೆ, ಇತ್ಯಾದಿಗಳಲ್ಲಿ ಸ್ಥಾನವನ್ನು ಮೀಸಲಿಡುವ ಅಗತ್ಯವನ್ನು ಒಪ್ಪಿದರು; ಅನುಸೂಚಿತಜಾತಿಯವರ ವಸತಿಗೃಹಗಳಲ್ಲಿ ಸವರ್ಣೀಯರಿಗೂ ಸ್ಥಳಕೊಡುವ ಅಗತ್ಯವನ್ನೂ ಸ್ವಾಗತಿಸಿದರು. ಇವು ನಿಧಾನವಾಗಿ ಕಾರ್ಯರೂಪಕ್ಕೆ ಬರುತ್ತಿವೆ.
 	
1956ರಲ್ಲಿ ಸಹಸ್ರಗಟ್ಟಲೆ ಅನುಸೂಚಿತಜಾತಿಯ ಜನರು ಭೌದ್ಧಮತವನ್ನು ಸ್ವೀಕರಿಸಿದರು; ಆದರೂ ಅವರಿಗೆ ರಾಜ್ಯಾಂಗದತ್ತ ಸೌಲಭ್ಯಗಳೆಲ್ಲ ದೊರಕುತ್ತಿವೆ.
 	
ಅನುಸೂಚಿತಜಾತಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾಗಿರುವುದರಿಂದ ಅವನ್ನೆಲ್ಲ ಒಟ್ಟಾರೆ ಉಲ್ಲೇಖಿಸುವುದು ಅಗತ್ಯವೆನಿಸಲಾರದು. ಆದರೆ ಮೈಸೂರು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ನಿಗದಿಯಾಗಿರುವ ಅನುಸೂಚಿತಜಾತಿಗಳ ಪಟ್ಟಿಗಳನ್ನು ಕೆಳಗೆ ಕೊಟ್ಟಿದೆ.
 	
I ಕೊಡಗು, ಬೆಳಗಾಂ, ಬಿಜಾಪುರ, ಧಾರವಾಡ, ಉ. ಕನ್ನಡ, ದ. ಕನ್ನಡ, ಗುಲ್ಬರ್ಗ, ರಾಯಚೂರ್, ಮತ್ತು ಬೀದರ್ ಜಿಲ್ಲೆ, ಮೈಸೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕನ್ನುಳಿದು ಮಿಕ್ಕೆಲ್ಲ ಮೈಸೂರು ರಾಜ್ಯದಲ್ಲಿನ ಅನುಸೂಚಿತಜಾತಿಗಳೂ; (1) ಆದಿ ಆಂಧ್ರ, (2) ಆದಿದ್ರಾವಿಡ, (3) ಆದಿ ಕರ್ಣಾಟಕ, (4) ಬಣಜಾರ ಅಥವಾ ಲಂಬಾಣಿ; (5) ಭೋವಿ, (6) ಒಕ್ಕಲಿಗ, (7) ಗಂಟೆಕೋರ; (8) ಹಂಡೆಜೋಗೆ; (9) ಕೆಫ್‍ಮಾರಿ; (10) ಕೊರಚ; (11) ಕೊರಮ; (12) ಮಾಚಲ; (13) ಮೋಚಿ; (14) ಸಿಳ್ಳೆಕ್ಯಾತ; (15) ಸುಡುಗಾಡು ಸಿದ್ಧ.
 	
II ಬೆಳಗಾಂ, ಬಿಜಾಪುರ, ಧಾರವಾಡ ಮತ್ತು ಕನ್ನಡ ಜಿಲ್ಲೆಗಳಲ್ಲಿ ಅನುಸೂಚಿತಜಾತಿಗಳ ಪಟ್ಟಿ: (1) ಅಗೆರ್, (2) ಬಕಡ ಅಥವಾ ಬಂಟ; (3) ಬಾಂಬಿ, ಬಾಂಭಿ, ಅಸಾದರು, ಅಸೋಡಿ, ಚಮಡಿಯ, ಚಮ್ಮಾರ, ಚಂಬಾರ, ಚಾಮಗಾರ, ಹರಳಯ್ಯ, ಹರಳಿ, ಖಾಲ್ಪ, ಮಾಚಿಗರು, ಮಾದರು, ಮೋಚಿ, ತೆಲುಗು ಮೋಚಿ, ಕಾಮಾಟಿ ಮೋಚಿ, ರಾಣಿಗರು, ರೋಹಿದಾಸ್, ರೋಹಿತ ಅಥವಾ ಸಂಗರ; (4) ಭಂಗಿ, ಮೆಹ್ತರ್, ಒಲ್ಗಾಣ, ಭುಕ್ಕಿ, ಮಲ್ಕಣ, ಹಲಾಲಕೊರ, ಲಾಲಿಬಿಗಿಬಲ್ಮಕಿ, ಕೊರರು, ಜಾಡಮಾಲಿ; (5) ಚಲವಾದಿ ಅಥವಾ ಜನ್ನಯ್ಯ; (6) ಜನ್ನದಾಸರು ಅಥವಾ ಹೊಲೆಯದಾಸರು (7) ಥೊರ, ಕಕ್ಕಯ್ಯ, (8) ಗಾರೋಡ ಅಥವಾ ಗಾರೋ; (9) ಹಳ್ಳೀರು; (10) ಹಲ್ಸರು, ಹಸ್ಲರು, ಹುಳಸ್ವರು ಅಥವಾ ಹಳಸ್ವರು; (11) ಹೊಲರ ಅಥವಾ ವಲ್ಲರು; (12) ಹೊಲೆಯ ಅಥವಾ ಹೊಲೇರು; (13) ಲಿಂಗದೇರ; (14) ಮಹರ್ ತರಲ್ ಅಥವಾ ದೇಗುಮೇಗು; (15) ಮಹ್ಯಾವಂಶಿ, ಧೇಡ್‍ವಂಕರು ಅಥವಾ ಮಾರುವಂಕರು; (16) ಮಂಗರು, ಮಾತಂಗರು ಅಥವಾ ಮಿನಿಮಾದಿಗರು; (17) ಮಂಗಗರುಡಿ; (18) ಮೇಘವಾಲ್ ಅಥವಾ ಮೆಂಗವಾರ್; (19) ಮುಕ್ರಿ; (20) ನದಿಯ ಅಥವಾ ಹಾದಿ; (21) ಪಾಸಿ; (22) ಬೆನ್ವ, ಚನ್ವ ಅಥವಾ ಸೇಡ್ಮ ಅಥವಾ ರಾವಕ; (23) ರೀರ್‍ಗಾರ ಅಥವಾ ತೀರ್ಬಂದ; (24) ತುರಿ.
ಕನ್ನಡ ಜಿಲ್ಲೆಯಲ್ಲಿ: ಕೋಟೆಗಾರ ಅಥವಾ ಮೇಟ್ರಿ.
 	
III ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅನುಸೂಚಿತಜಾತಿಗಳು: (1) ಅನಾಮಿಕ; (2) ಅರೆ (ಮಾಲ); (3) ಆರ್ವಮಾಲ; (4) ಬೇಡ ಜಂಗಂ; (5) ಚಂಡ್ಲ; (6) ಬ್ಯಾಗರ; (7) ಚಲ್ವಾದಿ; (8) ಚಂಬಾರ; (9) ದಕ್ಕಲ್; (10) ಧೋರ್; (11) ಎಲ್ಲಮಲ್ಲರ್; (12) ಹೊಲೆಯ; (13) ಹೊಲೆಯದಾಸರಿ; (14) ಕೋಲು ಪುಲ್ವಂಡ್ಲು; (15) ಮಾದಿಗ; (16) ಮಹರ್; (17) ಮಲ; (18) ಮಲದಾಸರಿ; (19) ಮಲಹಣ್ಣೈ; (20) ಮಲಜಂಗಮ; (21) ಮಲಮಾಸ್ತಿ; (22) ಮಲಸಾಲೆ; (23) ಮಲಸನ್ಯಾಸಿ; (24) ಮಂಗ್; (25) ಮಂಗ್‍ಗರೂಡಿ; (26) ಮನ್ನೆ (27) ಮಾಸ್ತಿ; (28) ಮೆಹ್ತರು; (29) ಮಿತ್ತಯ್ಯಲ್ಟರ್; (30) ಮೋಚಿ; (31) ಸಾಮಗಾರ (32) ಚಿಂಡೊಳ್ಳು.
 	
iಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಸೂಚಿತಜಾತಿಗಳು: (1) ಆದಿಆಂಧ್ರ; (2) ಆದಿದ್ರಾವಿಡ; (3) ಆದಿಕರ್ಣಾಟಕ; (4) ಅಜಿಲ; (5) ಆರುಂತತಿಯರು; (6) ಬೈರ; (7) ಬಕುಂಡ; (8) ಬಂಡಿ; (9) ಬೆಲ್ಲಾರ; (10) ಚಕ್ಕಿಲಿಯನ್ (11) ಚಲವಾದಿ; (12) ಚಮ್ಮಾರ ಅಥವಾ ಮೋಚಿ; (13) ಚಂಡಾಲ; (14) ಚೆರುಮನ್; (15) ದೇವೇಂದ್ರ ಕುಲದನ್ (16) ದೊಮ್ಮ, ದೊಂಬರು; (17) ಗೊಡಗಾಲಿ; (18) ಗೊಡ್ಡ; (19) ಗೋಸಂಗಿ; (20) ಹೊಲೆಯ; (21) ಜಗ್ಗಲಿ; (22) ಜಾಂಬುವುಲು; (23) ಕದಯನ್; (24) ಕಲ್ಲಾಡಿ; (25) ಕರಂಪಲನ್; (26) ಕೂಸ; (27) ಕಡುಂಬನ್; (28) ಕುರವನ್; (29) ಮಾದಾರಿ; (30) ಮಾದಿಗ; (31) ಮೈಲ; (32) ಮಾಲ; (33) ಮಾವಿಲನ್; (34) ಮೊಗರ್; (35) ಮುಂಡಲ; (36) ನಲಕೆಯವ; (37) ನಾಯಡಿ; (38) ಪಗಡೆ; (39) ಪಲ್ಲನ್; (40) ಪಂಬದ; (41) ಪಣ್ಣಿಯಂಡಿ; (42) ಪರೈಯನ್; (43) ಪುತ್ತಿರೈವನ್ನನ್; (44) ರಾನೆಯರ್; (45) ಸಾಮಗಾರ; (46) ಸಾಮ್ಬನ್; (47) ಸಾಪರಿ; (48) ಸೆಮ್ಮನ್; (49) ತೋಟಿ; (50) ತಿರುವಲ್ಲುವರ್; (51) ವಲ್ಲುವನ್.
 
ಗಿ ಕೊಳ್ಳೇಗಾಲ ತಾಲ್ಲೂಕಿನ ಅನುಸೂಚಿತಜಾತಿಗಳು: (1) ಪನ್ನಡಿ; (2) ವಾತಿರಿಯನ್.
 ಗಿI ದಕ್ಷಿಣಕನ್ನಡ ಜಿಲ್ಲೆಯ ಅನುಸೂಚಿತ ಜಾತಿಗಳು: (1) ಭತಡ; (2) ಹಾಸ್ಲ; (3) ನಾಲ್ಕದಯ; (4) 
 ಪರವನ್.
 
ಗಿII ಕೊಡಗು ಜಿಲ್ಲೆಯ ಅನುಸೂಚಿತ ಜಾತಿಗಳು: (1) ಆದಿದ್ರಾವಿಡ; (2) ಆದಿಕರ್ಣಾಟಕ; (3) ಅದಿಯ; (4) ಬಲಗೈ (5) ಹೊಲೆಯ: (6) ಮಾದಿಗ; (7) ಮೂಚಿ; (8) ಮುಂಡಲ; (9) ಪಾಲೆ; (10) ಪಂಚಮ; (11) ಪರಯ; (12) ಸಾಮಗಾರ.											
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ